ತಮ್ಮಟಕಲ್ಲು ಶಾಸನ ಪೂರ್ವದ ಹಳಗನ್ನಡದ ವೀರಗಲ್ಲು ಶಾಸನ. ಚಿತ್ರದುರ್ಗ ತಾಲ್ಲೂಕಿನ ತಮ್ಮಟಕಲ್ಲು ಗ್ರಾಮದಲ್ಲಿ ದೊರೆತಿದೆ. 'ಎಫಿಗ್ರಾಫಿಯ ಕರ್ನಾಟಕ'ದ ಸಂಪುಟ ೬ರಲ್ಲಿರುವ ೪೨ ಮತ್ತು ೪೩ನೇ ಶಾಸನಗಳಲ್ಲಿ ೪೩ನೇ ವೀರಗಲ್ಲು ಬಹಳ ಪ್ರಮುಖವಾದುದು. ಇದರ ಕಾಲ ಕ್ರಿ.ಶ ೫೦೦. ಇದರಲ್ಲಿ 'ಬಿನಮಣಿಅನ್ತುಭೋಗಿಬಿಣದುಳ್ಮಣಿಲ್ಮನದೋನ್' ಎಂದು ಆರಂಭವಾಗುವ ವೃತ್ತವಿದೆ. ಇದು ಸಂಸ್ಕೃತದಲ್ಲಿ ಪ್ರಸಿದ್ಧವಾಗಿರುವ ಅವಿತರ ಅಥವಾ ಕರ್ನಾಟಕಎಂಬ ಹೆಸರಿನ ವೃತ್ತವೇ ಆಗಿದೆ. ಇದು ಪ್ರಾಸಯುಕ್ತವಾಗಿದೆ. ಇದರಿಂದ ಆ ಕಾಲಕ್ಕೆ ಸಂಸ್ಕೃತದ ಪ್ರಭಾವ ಕನ್ನಡದ ಮೇಲೆ ಅಧಿಕವಾಗಿತ್ತೆಂಬುದು ತಿಳಿಯುತ್ತದೆ. ಭಾಷಿಕ ಅಧ್ಯಯನಕ್ಕೆ ಈ ಶಾಸನ ಒಳ್ಳೆಯ ಲಕ್ಷ್ಯಕೃತಿಯಾಗಿದೆ. == ಶಾಸನದ ಇತಿವೃತ್ತ == ಗುಣಮಧುರಾಂಕ ಎಂಬುವವನು ರತ್ನದಂತೆ ತೇಜಸ್ವಿಯಾಗಿದ್ದಾನೆ. ಇವನು ರಣರಂಗದಲ್ಲಿ ಬಿಲ್ಲು ಹಿಡಿದು ನಿಂತನೆಂದರೆ ಯಾರೂ ತಡೆಯಲಾಗದು. ಇವನು ಅನಂತ ಗುಣವಂತನಾಗಿಯೂ, ಪ್ರಣಯಿಜನಕ್ಕೆ ಕಾಮನ ಬಿಳಿಯ ತಾವರೆಯ ಬಾಣದಂತಹವನೂ, ಪುರುಷ ಶ್ರೇಷ್ಠನೂ ಆದ ಇವನೂ ಪುರುಷರಲ್ಲೆ ಉತ್ಕೃಷ್ಠನಾದವನಾಗಿದ್ದಾನೆ ಎಂದು ಗುಣಮಧುರಾಂಕನನ್ನು ಹೊಗಳಲಾಗಿದೆ. ಈ ಶಾಸನ ಭಾಷಿಕ ಅಧ್ಯಯನಕ್ಕೆ ಲಕ್ಯ್ಷ ಕೃತಿ ಎಂಬ ಅಭಿಪ್ರಾಯವಿದೆ.